94 ಸಿವಿಲ್ ನ್ಯಾಯಧೀಶ ಹುದ್ದೆಗೆ ಅರ್ಜಿ ಆಹ್ವಾನ: ನೇರ ನೇಮಕಾತಿ
ರಾಜ್ಯಾದ್ಯಂತ ಖಾಲಿಯಿರುವ 94 ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿಗೆ ಕರ್ನಾಟಕ ಹೈಕೋರ್ಟ್ ಅರ್ಜಿ ಆಹ್ವಾನಿಸಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಏಪ್ರಿಲ್ 27ರವರೆಗೂ ಅವಕಾಶ ಕಲ್ಪಿಸಲಾಗಿದೆ.
ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು, ವಕೀಲರಾಗಿ ನೋಂದಣಿ ಆದವರು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ 38 ವರ್ಷ ಹಾಗೂ ಇತರರಿಗೆ 35 ವರ್ಷ ಮೀರಿರಬಾರದೆಂದು ವಯೋಮಿತಿ ನಿಗದಿಪಡಿಸಲಾಗಿದೆ. ಮಾಜಿ ಸೈನಿಕರಿಗೆ ವಯೋಮಿತಿಯಲ್ಲಿ ಮೂರು ವರ್ಷ ಸಡಿಲಿಕೆ ಇದೆ.
ಉಚ್ಚ ನ್ಯಾಯಾಲಯ, ಜಿಲ್ಲಾ ನ್ಯಾಯಿಕ ವಿಭಾಗದ ಸಿಬ್ಬಂದಿ ಮತ್ತು ಪ್ರಾಸಿಕ್ಯೂಷನ್, ಸರ್ಕಾರಿ ವ್ಯಾಜ್ಯ ನಿರ್ವಹಣೆ ಇಲಾಖೆಯ ಸಹಾಯಕ ಸರ್ಕಾರಿ ಪ್ರಾಸಿಕ್ಯೂಟರ್ ಹಾಗೂ ಹೆಚ್ಚುವರಿ ಸರ್ಕಾರಿ ನ್ಯಾಯವಾದಿಗಳಿಗೆ ಪ್ರತ್ಯೇಕ ವಯೋಮಿತಿ ನಿಗದಿಯಾಗಿದೆ. ಇವರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರಾಗಿದ್ದರೆ 43 ವರ್ಷ ಹಾಗೂ ಇತರರಾಗಿದ್ದರೆ 40 ವರ್ಷ ಮೀರಿರಬಾರದು ಎಂದು ಹೈಕೋರ್ಟ್ ತಿಳಿಸಿದೆ.
ಉಚ್ಚ ನ್ಯಾಯಾಲಯವು ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಅದರಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಲಿಖಿತ ಪರೀಕ್ಷೆ ಎಂಬ ಮೂರು ಹಂತಗಳಿರುತ್ತವೆ. ಮುಖ್ಯ ಲಿಖಿತ ಪರೀಕ್ಷೆಗೆ ಅರ್ಹತೆ ಹೊಂದುವುದಕ್ಕಾಗಿ ಮಾತ್ರ ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ.
ಒಟ್ಟು 94 ಹುದ್ದೆಗಳ ಪೈಕಿ ಸಾಮಾನ್ಯ ವರ್ಗಕ್ಕೆ 37, ಪರಿಶಿಷ್ಟ ಜಾತಿಗೆ 10, ಪರಿಶಿಷ್ಟ ಪಂಗಡಕ್ಕೆ 4, ಪ್ರವರ್ಗ-1ಕ್ಕೆ 13, ಪ್ರವರ್ಗ-2ಎಗೆ 15, ಪ್ರವರ್ಗ-2ಬಿಗೆ 6, ಪ್ರವರ್ಗ-3ಎಗೆ 5, ಪ್ರವರ್ಗ-3ಬಿಗೆ 4 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಇಷ್ಟೇ ಅಲ್ಲದೇ ಈ ಮೀಸಲಾತಿಗಳಲ್ಲಿ ಮಹಿಳೆಯರಿಗೆ 29, ಕನ್ನಡ ಮಾಧ್ಯಮದವರಿಗೆ 5, ಗ್ರಾಮೀಣ ಅಭ್ಯರ್ಥಿಗಳಿಗೆ 26, ಮಾಜಿ ಸೈನಿಕರಿಗೆ 9, ವಿಕಲ ಚೇತನರಿಗೆ 3 ಹುದ್ದೆಗಳೆಂದು ಒಳ ಮೀಸಲಾತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು, ಶುಲ್ಕ ಪಾವತಿಸಲು ಹಾಗೂ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗೆ ಕೆಳಗಿನ notification ನೋಡಿ.
_________________